ಅದಿಲಾಬಾದ್
	
ಕನ್ಯಾಕುಮಾರಿಯಿಂದ ಕಾಶಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಪುರ ಮತ್ತು ಹೈದರಾಬಾದ್‍ಗಳ ಮಧ್ಯದಲ್ಲಿದೆ. ಮಧ್ಯರೈಲ್ವೆಯ ಮುದ್‍ಖೇಡ್ ಶಾಖೆಯ ಕೊನೆಯ ನಿಲ್ದಾಣ. ನಾಗಪುರದಿಂದ ನೈಋತ್ಯಕ್ಕೆ 183 ಕಿ.ಮೀ. (190 4 ಉ. ಅಕ್ಷಾಂಶ ಮತ್ತು 780 33 ಪೂ. ರೇಖಾಂಶ) ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ. ಜನಸಂಖ್ಯೆ 17,196 (1951) ಅನೇಕ ಸರಕಾರಿ ಕಚೇರಿಗಳಿವೆ. ಇಲ್ಲಿ ಹಿಂದೂ ದೇವಾಲಯವಿದ್ದು, ಪ್ರತಿವರ್ಷ ಪರಿಷೆ ನಡೆಯುತ್ತದೆ; ಅಲ್ಲದೆ ಇದು ಧಾನ್ಯಸರಕುಗಳ ಮಾರುಕಟ್ಟೆ ಮತ್ತು ವ್ಯಾಪಾರ ಸ್ಥಳ.
	
ಅದಿಲಾಬಾದಿನ ವಾಯುವ್ಯದಿಕ್ಕಿಗೆ 60 ಕಿ.ಮೀ. ದೂರದಲ್ಲಿ ಮಹುರ್ ಎಂಬಲ್ಲಿ ಪ್ರಾಚೀನ ಕೋಟೆಯಿದೆ. 14-16ನೆಯ ಶತಮಾನದಲ್ಲಾಳಿದ ಮುಸಲ್ಮಾನ್ ಬಹಮನಿ ಮತ್ತು ಇಮಾದ್‍ಷಾಹಿ ಸುಲ್ತಾನರ ಕಾಲದ ಅವಶೇಷಗಳನ್ನು ಅಲ್ಲಿ ನೋಡಬಹುದು. 
	
ಅದಿಲಾಬಾದ್ ತಾಲ್ಲೂಕು ಹಾಗೂ ಜಿಲ್ಲೆ: ಗೋದಾವರಿ ಮತ್ತು ಪೆನಗಂಗಾ ನದಿ ಕಣಿವೆಗಳ ಮಧ್ಯಭಾಗದಲ್ಲಿ ಸಮುದ್ರ ಮಟ್ಟಕ್ಕೆ 2,000 ಎತ್ತರವಾದ ಪ್ರಸ್ಥಭೂಮಿ ಪ್ರದೇಶದಲ್ಲಿದೆ. ವಿಸ್ತೀರ್ಣ 6,501 ಚ.ಮೈ. ಜನಸಂಖ್ಯೆ-8,31,600 (1951). ಮುಖ್ಯ ನದಿಗಳು - ಗೋದಾವರಿ ಮತ್ತು ಪೆನಗಂಗಾ.
	
ಅದಿಲಾಬಾದ್, ಸಿರ್ನೂರ್, ರಾಜುರ, ನಿರ್ಮಲ್, ಕಿನ್ಯತ್, ಚಿಣ್ಣೂರ್, ಲಕ್ಷೇತಿಪೇಟೆ ಮತ್ತು ಜಂಗೋನ್ ಎಂಬ ಎಂಟು ತಾಲ್ಲೂಕುಗಳು ಇವೆ. ಅದಿಲಾಬಾದ್, ನಿರ್ಮಲ್ ಮತ್ತು ಚಿಣ್ಣೂರು ಈ ಜಿಲ್ಲೆಯ ಮುಖ್ಯ ಪಟ್ಟಣಗಳು.
	
ಜಿಲ್ಲೆಯ ಪೂರ್ವಭಾಗ ಮಧ್ಯ ರೈಲ್ವೆಯ ವಾರ್ಧಾ-ಸಿಕಂದರಾಬಾದ್ ಬ್ರಾಡ್‍ಗೇಜ್ ರೈಲುಮಾರ್ಗಗಳನ್ನು ಹೊಂದಿದೆ. ಅಸಿಫಾಬಾದ್ ಈ ದಾರಿಯಲ್ಲಿರುವ ಮುಖ್ಯ ವ್ಯಾಪಾರ ಕೇಂದ್ರ.
	
ಸಹ್ಯಾದ್ರಿ ಅಥವಾ ಸತ್ಮಲಪರ್ವತ ಜಿಲ್ಲೆಯ ಆಗ್ನೇಯ-ವಾಯುವ್ಯ ದಿಕ್ಕಿನಲ್ಲಿ ಹಬ್ಬಿದೆ. ವಾರ್ಷಿಕ ಮಳೆ 40". ಈ ಜಿಲ್ಲೆ ಸಂಪದ್ಭರಿತ ಕಾಡುಗಳಿಂದ ಕೂಡಿದ್ದು, ತೇಗ, ಎಬೊನಿ ಮುಂತಾದ ಮರಗಳನ್ನು ಇಲ್ಲಿಂದ ಸಾಗಿಸುತ್ತಾರೆ. ವನ್ಯಮೃಗ ಬೇಟೆ ಬಹಳವಾಗಿದೆ. ಜಿಲ್ಲೆಯ ಮುಖ್ಯ ಬೆಳೆ ಬತ್ತ, ಗೋದಿ, ಎಣ್ಣೆಬೀಜಗಳು ಮತ್ತು ಹತ್ತಿ.
	
ಕಣಿವೆ ಪ್ರದೇಶದಲ್ಲಿ ಕಲ್ಲಿದ್ದಲು, ಸುಣ್ಣಕಲ್ಲು, ಕಬ್ಬಿಣದ ಅದುರು, ಗಂಧಕ ದೊರಕುವುವು. ಇತರ ಸಿದ್ಧವಸ್ತುಗಳಲ್ಲಿ ಮುಖ್ಯವಾದವು. ಕಾಗದ, ರೇಷ್ಮೆ, ರಾಸಾಯನಿಕ ಪದಾರ್ಥಗಳು ಮತ್ತು ಆಟದ ಸಾಮಾನುಗಳು.			(ಕೆ.ಆರ್.)
	
ದೆಹಲಿಯಿಂದ 20 ಕಿ.ಮೀ. ದಕ್ಷಿಣಕ್ಕೆ ಮೆಹ್ರೌಲಿ ಬಳಿ ತುಘ್ಲಕಾಬಾದಿಗೆ ಸೇರಿದಂತೆ ಅದಿಲಾಬಾದ್ ಎಂಬ ಇನ್ನೊಂದು ಹಳೆಯ ಪಟ್ಟಣವಿದೆ. ಈಗ ಹಾಳು ಬಿದ್ದಿದೆ. ಘಿಯಾಸುದ್ದೀನ್ ತುಘ್ಲಕನಿಂದ 1321ರಲ್ಲಿ ಇದರ ನಿರ್ಮಾಣಕಾರ್ಯ ಪ್ರಾರಂಭವಾಗಿ 1323ರಲ್ಲಿ ಮುಗಿಯಿತು. ಅವನ ಮಗ ಮಹಮ್ಮದ್ ಬಿನ್ ತುಘ್ಲಕನ ಆಜ್ಞೆಯಂತೆ 1327ರಲ್ಲಿ ತೆರವು ಮಾಡಲ್ಪಟ್ಟಿತು.											
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ